ಬದುಕಲ್ಲಿ ಬಾರದಿನ್ನು ಆ ದಿನಗಳು…

ಏಪ್ರಿಲ್ 12, 2010 at 10:30 AM (article) (, , )

ಗೇರುಬೀಜ..

ಇಂದು ಸಂಪದದಲ್ಲಿ ರಶ್ಮಿಯವರು ಬರೆದ ಒಂದು ಬಾಲ್ಯದ ತುಣುಕು ನನ್ನ  ಕೀಲಿ ಮಣೆ ಕುಟ್ಟುವಂತೆ ಮಾಡಿತು..
ಬಾರದಿನ್ನು ಆದಿನಗಳು ಎಂದೆನಿಸಿದ್ದು ಹೌದು. ಈ ಹೆಚ್ಚಿನ ಓದು, ಕಾಂಗೀಟ್ ನಾಡು ನನ್ನೆಲ್ಲಾ ಕಳೆದ ಬಾಲ್ಯವನ್ನು ಮತ್ತೆ ಬಾರದಂತೆ ಮಾಡಿದೆ..

ಇದೇ ಎಪ್ರಿಲ್ ,ಮೇ ತಿಂಗಳು ಶಾಲೆಗೆ ರಜ.. ತಿರುಗಾಟದಲ್ಲಿ ಮಜ! ಊರಿಗೆ ಹೋದರೆ ನಾವು ಚಿಕ್ಕಪ್ಪನ ಮಕ್ಕಳೆಲ್ಲಾ ಸೇರಿ ಅಜ್ಜಿ ಜೊತೆ ಗೇರು ಬೇಜ ಗುಡ್ಡಕ್ಕೆ ಹೋದರೆ, ಅಜ್ಜಿ.. ಗೇರು ಬೀಜ ಕೊಕ್ಕೆಯಲ್ಲಿ ಎಳೆದು ಉದುರಿಸಿದರೆ ನಾವು ಜಗಳವಾಡಿ ಹೆಕ್ಕುತ್ತಿದ್ದೆವು. ಉತ್ಸಾಹದಲ್ಲಿ ಮಾಡಿದರೆ ಗೋಡಂಬಿ ಜಾಸ್ತಿ ಸಿಗುತ್ತದೆ.. 🙂 ಅಜ್ಜಿ ಇಂಪ್ರೆಸ್ ಆಗ್ಬೇಕಲ್ಲಾ..  ನಾಜೂಕಾಗಿರೋ.. ಕಡು ಕೆಂಪು, ಹಳದಿ ಬಣ್ಣದ ಚೂರೂ ತರಚಿರದ ಹಣ್ಣುಗಳನ್ನು ಆರಿಸಿಟ್ಟು ಕೊಳ್ಳುತ್ತಿದ್ದೆವು. ಹೆಕ್ಕಿದ ಎಲ್ಲಾ ಗೇರು ಬೀಜವನ್ನು ಕುರುವೆಗೆ(ಬಿದಿರಿನಿಂದ ಮಾದಿದ ಬಕೆಟ್)  ತುಂಬಿ ಮನೆಯಂಗಳದಲ್ಲಿ ಹಾಕಿ, ನೆಕ್ಸ್ಟ್ ಪ್ರೋಗ್ರಾಂಮ್ ಆ ಬೀಜವನ್ನು ಹಣ್ಣಿನಿಂದ ಬೇರ್ಪಡಿಸುವುದು. ತಿರುಚಿ, ತಿರುಚಿ ಜೋಶ್ ನಲ್ಲೇ ಬೀಜ ಬೇರ್ಪಡಿಸಿದೆವು.. ಆದರೆ ಆ ಹಣ್ಣಿನ ರಸ ಕೈಗೆಲ್ಲ ಸೋಕಿದಾಗ ಮೂಸುವ ಸಾಹಸ ಮಾಡಬಾರದು. ಕೆಟ್ಟ ವಾಸನೆ. ಬಟ್ಟೆ ಒಗೆಯೋ ಸೋಪ್ ಹಾಕಿ ತಿಕ್ಕಿದರೂ.. ಹೋಗದು. ಕೆಲ್ವೊಮ್ಮೆ ಆ ಕೆಲ್ಸಕ್ಕೆ ಹಿಂದೇಟು ಹಾಕುತ್ತಿದ್ದೆವು.. ಇದೇ ಕಾರಣಕ್ಕೆಯೇ..! 🙂 ಆರಿಸಿಟ್ಟ ಹಣ್ಣುಗಳನ್ನು ಸಮವಾಗಿ ತುಂಡರಿಸಿ ಉಪ್ಪನ್ನು ಸವರಿ ತಿಂದ ರುಚಿ, ಸ್ಟ್ರಾಬೆರೆ ಸವಿದರೆ ಸಿಗದು!!

ಅಜ್ಜನ ಜೊತೆ ಎಲ್ಲ ಮೊಮ್ಮಕ್ಕಳ ದಂಡು ಒಂದು ಪುಟ್ಟ ಕೊಕ್ಕೆ ಹಿಡಿದು ತೋಟಕ್ಕೆ ಹೋಗುವುದರಲ್ಲೇ ಗೊತ್ತಾಗುತ್ತಿತ್ತು ಜಂಬುನೇರಳೆಗೆ ಇವತ್ತು ಕೆಳಗುದುರುವ ಸಂಭ್ರಮವೆಂದು! ಮಾವಂದಿರು ಜೊತೆಗಿದ್ದರೆ ಮಕ್ಕಳಿಗೆ ಅವರಿಗಾಗಿ ಉಳಿದದ್ದು ಎಂದು ಹೇಳಬೇಕೆಂದಿಲ್ಲ.. ಕೊಕ್ಕೆ ಅವರ ಕೈ ಸೇರಿದರೆ ಕಿತ್ತು ಹಾಕಿ , ಹಣ್ಣು ಅವರ ಹೊಟ್ಟೇ ಸೇರುತ್ತಿತ್ತು.. ಅದಕ್ಕೆ ಅಜ್ಜ,,ಇಲ್ಲ ನಾವು  ಮಕ್ಕಳೇ ಮಾತ್ರ ಹೊರಡುತ್ತಿದ್ದೆವು. ಸಾಹಸ ಪಟ್ಟು ಮೊದಲ ಕೊಂಬೆಗೆ ಕಾಲಿಟ್ಟು ಬಾಲೆನ್ಸ್ ಅಲ್ಲಿ ಕೆಳಕ್ಕೆ ಹಾಕಿ ಅದನ್ನು ಕ್ಯಾಚ್ ಹಿಡೆಯಲು ನಾಲ್ಕಾರು ಮಂದಿ, ಒಬ್ಬರ ಕೈಗೂ ಸಿಗದೆ ಕೆಳಕ್ಕೆ ದೊಪ್ಪೆಂದು ಉದುರುತ್ತಿತ್ತು. ಅದು ಹಣ್ಣುಗಳ ಬ್ಯಾಲೆನ್ಸ್!! 🙂

ಸಂಜೆ ಮನೆಯವರೆಲ್ಲಾ ಸೇರಿ ಬೀಜ ಸುಟ್ಟು ಹಾಕುವುದಕ್ಕೆ ಸಿದ್ಧತೆ.. ಕಳೆದ ವರುಷದ ಸ್ಟಾಕ್ ಇಟ್ಟ ಗೇರು ಬೀಜಗಳನ್ನು ಅಟ್ಟದಲ್ಲಿಟ್ಟ ಕರಿ ಮಣ್ಣಿನ ಮಡಿಕೆಯಿಂದ ಹೊರ ತೆಗೆದು ಅಂಗಳದಲ್ಲಿ ಹಾಕಿ ಅದರ ಮೇಲೆ ಸ್ವಲ್ಪ ಸೀಮೆ ಎಣ್ಣೆಯ ಪ್ರೋಕ್ಷಣೆ.. ಬೆಂಕಿ ಹತ್ತಬೇಕಲ್ಲಾ… ಅದಕ್ಕೆ!  ತೆಂಗಿನ ಒಣಗಿದ ಗರಿಗಳನ್ನು ಒಟ್ಟುಗೂಡಿಸಿ ಅದಕ್ಕೆ ಬೆಂಕಿ ಕೊಟ್ಟು ಮೆಲ್ಲಗೆ ಬೀಜಗಳಿಗೆಲ್ಲಾ ಬೆಂಕಿಯ ಸ್ಪರ್ಶ ಮಾಡಿವುಸು, ನಾವೆಲ್ಲ ಕುತೂಹಲದಲ್ಲಿ ಸುತ್ತಲೂ  ನಿಂತು ಬಿಟ್ಟ ಕಣ್ಣು ಬಿಟ್ಟಂತೆ ನೋಡುವುದು, ಅಜ್ಜಿ ದೂರ ಹೋಗಿ ಮಕ್ಕಳೇ ಎಂದು ಬೊಬ್ಬಿಡುವುದು.. ಅದು ಟಪ್ ಟಪ್ ಎಂದು ಸದ್ದು ಮಾಡಿದಾಗ, ಅಡಿಕೆ ಹಾಳೆಯಲ್ಲಿ ತಂದಿಟ್ಟ ಒಲೆಯ ಬೂದಿಯನ್ನು ಅದರತ್ತ ಎಸೆಯುವುದು. ಇದು ಉರಿಯುತ್ತಿರುವ  ಬೆಂಕಿ ಆರಿಸುವ ಮೆಥಡ್!! ಅಗ್ನಿಶಾಮಕದವರಿಗೆ ಗೊತ್ತಿರಲಿಕ್ಕಿಲ್ಲ 😉 ತಣ್ಣಗಾದ ಮೇಲೆ ಅದನ್ನು ಗುದ್ದಿ ಬೀಜವನ್ನು ತೆಗೆದು ಡಬ್ಬಕ್ಕೆ ಹಾಕುತ್ತಿದ್ದರೆ ನಾವೆಲ್ಲ ತಿನ್ನಲು ಸಿಗದೇ..? ಎಂದು ಆಸೆಯಲ್ಲಿ ನೋಡುವುದು ಆಗ ಅಜ್ಜಿ ಎರಡೆರದು ಕೈಗೆ ಗೇರು ಬೇಜ ಕೊಟ್ಟು ಎಲ್ಲ ಕೆಲಸ ಮುಗಿದ ನಂತರ ಕೊಡ್ತೇವೆ ಆಡಿಕೊಳ್ಳಿ ಎಂದು ಕಳುಹಿಸುತ್ತಿದ್ದರು. ರಾತ್ರಿ ಒಂದೊಂದು ಮುಷ್ಟಿ ಎಲ್ಲರಿಗೂ ಗೋಡಂಬಿಯನ್ನು ಕೊಟ್ಟು ಒಂದೆಡೆ ಎಲ್ಲರೂ ಕೂತು ಮಾತಾಡುತ್ತಾ ತಿನ್ನುತ್ತಿದ್ದೆವು.. ಎಲ್ಲಾ ಸಂಭ್ರಮದ ದಿನಗಳವು..!!


ಕೈಯಲ್ಲಿ ಪೇಟೆಯಿಂದ ತಂದು ಗೋಡಂಬಿ ತಿನ್ನುವಷ್ಟೆಲ್ಲಾ ಹಣವಿದ್ದ ಕಾಲವಲ್ಲ. ಈಗ ಹಣವಿದೆ.. ಮಾಲ್ ಗಳಲ್ಲೇ ಬೇಕಾದ ಬ್ರಾಂಡ್  ಸಿಗುತ್ತದೆ.. ಆದರೆ ಮೇಲೆ ಬರೆದ ಅನುಭವಗಳೆಲ್ಲಾ ಏನೂ ಸಿಗದು! ಮತ್ತೆ ಆ ನೂರು ಇನ್ನೂರು ತೆತ್ತು ತಿಂದ ಗೋಡಂಬಿಯಲ್ಲಿ ಸಿಕ್ಕುವ ರುಚಿಯಾದರೂ ಎಂತು?? ಹಣವಿಲ್ಲದಿದ್ದಾಗ ಸಂತೋಷ ನೆಮ್ಮದಿ ಆತ್ಮೀಯತೆ ಇತ್ತು. ಹಣವಿಲ್ಲವೆಂಬ ಕೊರಗಿತ್ತು. ಹಣ ಬಂದಾಗ ಆ ಸಂತೋಷ ನೆಮ್ಮದಿ ಸಿಗದಿನ್ನು ಎನ್ನುವಂತಾಯಿತು.. ಹಾಸ್ಟೆಲಿನ ರೂಮಿನಲ್ಲಿ ಒಬ್ಬಳೇ ಕೀಲಿ ಮನೆ ಕುಟ್ಟುತ್ತಿದ್ದರೆ ನಾವು ಅವರನ್ನು ನೆನೆದು ಕೊಳ್ಳುವುದು, ಮನೆಯಲ್ಲಿ ಅವರು ನಮ್ಮನು ನೆನೆದು ಕೊಳ್ಳುವುದು.. ಬದುಕೆಂದರೆ ಇಷ್ಟೆಯೇ..??
ವಿಷು ಹಬ್ಬಕ್ಕೆ ಊರಿಗೊಂದು ಟ್ರಿಪ್ ಹಾಕಿ ದೊಡ್ಡವರ ಹಾರೈಕೆಯನ್ನು ಪಡೆದು ಬಂದು ಮತ್ತಷ್ಟು ಬಾಲ್ಯದ ಸಿಹಿ ನೆನಪನ್ನು ಬರೆಯುತ್ತೇನೆ..
ಪುತ್ತೂರು ಜಾತ್ರಾ ಮಹೋತ್ಸವಕ್ಕೆ( ೧೭-೪-೨೦೧೦) ಓದುಗರಿಗೆಲ್ಲರಿಗೂ ಸ್ವಾಗತ…
“ಮರಳಿ ಮಣ್ಣಿಗೆ””


-ನಲ್ಮೆಯಿಂದ
ದಿವ್ಯ

ಪರ್ಮಾಲಿಂಕ್ 2 ಟಿಪ್ಪಣಿಗಳು