ಶೀರ್ಷಿಕೆ ಇಲ್ಲದ ಅವಳ ಕಥೆ

ಜೂನ್ 14, 2011 at 12:28 ಅಪರಾಹ್ನ (article)

ಅವಳಲ್ಲಿ ಮನ ಬಿಚ್ಚಿ ಮಾತನಾಡಿದಾಗ ,ಇದು ಅವಳು ಎಂದು ಎನಿಸಿಕೊಳ್ಳುವ ಎಲ್ಲರ ಬದುಕಿನ ಕಥೆಯೋ ಏನೋ ಅಂತೆನಿಸಿತು. ನೂರಾರು ಕನಸುಗಳನ್ನು ಕಟ್ಟಿ ಬಂದ ಆಕೆಗೆ ಮದುವೆಯ ಮೊದಲ ರಾತ್ರಿ ಕೊಟ್ಟ ಭರವಸೆಯ ಮಾತುಗಳೆಲ್ಲ ಮಳೆಗಾಲದ ಮಳೆ ಕೊಚ್ಚಿಕೊಂಡು ಹೋಗುವಂತೆ ಮರುದಿನದಿಂದಲೇ ಒಂದೊಂದು ಮಾತು, ಉಳಿದವರ ಮಾತುಗಳಿಂದ ಕೊಚ್ಚಿ ಹೋಗಲಾರಂಭಿಸಿದ್ದವು. ಬದುಕೇನು ಎಂಬುದನ್ನು ಅರ್ಥ ಮಾಡಿಸಿತ್ತು. ತವರು ಮನೆಯಲ್ಲಿದ್ದಾಗಿನ ಸಂತಸವನ್ನು ನೆನೆದು ಎಲ್ಲಾ ಹೆಣ್ಣು ಮಕ್ಕಳೂ ಅವಳಂತೆಯೇ ಒಂದಲ್ಲ ಒಂದು ದಿನ ಬಚ್ಚಲಿನಲ್ಲಿ ನಳ್ಳಿ ಬಿಟ್ಟು ಅತ್ತಿರುತ್ತಾರೆ. ಆ ನಳ್ಳಿ ನೀರಿನ ಜೊತೆ ಕಣ್ಣೀರನ್ನು ಹೆಕ್ಕಲು ಯಾರೂ ಬರುವುದಿಲ್ಲ. ಗಂಡನ ಭರವಸೆಯ ಮಾತುಗಳು ಕೂಡಾ!. ಅವಳು ನನ್ನೊಂದಿಗೆ ಮಾತನಾಡಿದ ಒಂದೊಂದು ಮಾತುಗಳೂ ಎಲ್ಲಾ ಹೆಣ್ಣು ಮಕ್ಕಳು ಒಕ್ಕೊರಲಿನಿಂದ ಹೇಳಿದಂತೆ ಕೇಳಿಸಿತು.

ಮನೆ ಬೆಳಗುವವಳು ಮನ ಬೆಳಗದಿರುವಳೇ? ಬದುಕೇ ಅವನೆಂದು ತಿಳಿದು ಬದುಕುವವಳಿಗೆ ಅವನಿಂದ ಸಿಗುವುದು ಒಂದಿಷ್ಟು ನಿಟ್ಟುಸಿರಿನ ಉತ್ತರ, ದಟ್ಟಿಸಿ ಕೇಳಿದ ಪ್ರಶ್ನೆಗಳು ಮಾತ್ರ!. ಇಲ್ಲೂ ಮನಗಳಲ್ಲಿ ಮನೆ ಇಲ್ಲದೆ, ತನ್ನ ಮನೆ ಹೋಗಿ ಗಂಡನಮನೆಯಾಗಿ ತನ್ನ ಮನೆ ತವರುಮನೆಯಾಗಿ, ಮಾರ್ಪಟ್ಟು, ಬೇರ್ಪಟ್ಟು, ಆ ಮನಗಳನ್ನು ಮರೆಯಲಾಗದ ಸಂಕಟ, ಈ ಮನಗಳು ಮನದಲ್ಲಿಷ್ಟು ಜಾಗಕೊಡಲೊಲ್ಲದವರು. ಹ್ಮ್‌ಅವಳು ಹೇಳುತ್ತಿದ್ದ ಮಾತುಗಳು ಎಲ್ಲೋ ನಮ್ಮ ಬದುಕಿಗೂ ಹತ್ತಿರದಲ್ಲಿದೆ ಅಲ್ಲವೇ?

ಬೆಳಗ್ಗೆದ್ದರೆ ಅದೇ ಮೌನ. ಮೌನದಲ್ಲೊಂದಿಷ್ಟು ಮನಸ್ಸಿಲ್ಲದ ಮುಗುಳುನಗೆ. ಗಂಡ ಹೊರಡುವಾಗ ಗೇಟ್ ಬಳಿಗೆ ಬಂದು ಸಂಜೆ ಬೇಗ ಬರುವ್ ಎಂದು ಕಣ್ಣ ಸನ್ನೆಯಲ್ಲೇ ಕೇಳಿ ಕಳುಹಿಸುತ್ತಿದ್ದವಳು, ಈಗ ಹೊರಡುವಾಗ ಹಿಂತಿರುಗಿಯೂ ನೋಡದಷ್ಟು ಅವರಿಬ್ಬರ ಬದುಕು ಪಯಣಿಸಿದೆ.

ಇಬ್ಬರೂ ಕುಳಿತು ಮಾತನಾಡಿದರೆ ನೀನು ಹೋಗಬೇಕೆಂದಲ್ಲಿಗೆಲ್ಲ ಹೋಗಿದ್ದೇ, ಕೇಳಿದ್ದೆಲ್ಲ ತೆಗೆದು ಕೊಟ್ಟಿರುವೆ. ಇನ್ನೇನು ಬೇಕು? ಈ ಮಾಮೂಲಿ ಪ್ರಶ್ನೆ. ಅದನ್ನೆರಡನ್ನೂ ಬಿಟ್ಟು ಪ್ರೀತಿಯ ಮಾತುಗಳನ್ನಾಡಲು, ಭವಿಷ್ಯದ ಬಗ್ಗೆ ಕನಸುಗಳನ್ನು ಹಂಚಲು ಕೇಳಿ ಹೇಳಿಯೇ ಆಗಬೇಕೇ ಅಂದು ಅವಳು ಪ್ರಶ್ನೆ!

ಮನೆಯಲ್ಲಿ ಮಾಡಿಹಾಕಿದ್ದನ್ನು ತಿನ್ನು, ಕೆಲಸಕ್ಕೆ ಹೋಗು ಅದೇ ಗಂಡನಿಗಾಗೆ ಮತ್ತೆ ಕನಸುಗಳ ಕಟ್ಟಿ ಕಾದು ಕೂರುವುದು,ಬಂದ ನಂತರ ಮತ್ತದೇ ಮೌನ ಮಾತಾಡಿದರೆ ಅದೇ ಎರಡು ವಾಕ್ಯ, ಅದೇ ಬೆಳಗ್ಗೆ, ಅದೇ ಸಂಜೆ. ಅಷ್ಟು ಜನರಿದ್ದೂ ಅವಳು ಕೊನೆಗೂ ಒಬ್ಬಂಟಿ, ಏಕಾಂಗಿ!! ಆದರೂ ಕಣ್ಣೊರೆಸಿ ಅವಳು ಕೂರಲು ಕಾರಣ; ತನ್ನ ಕರುಳ ಕುಡಿಯಾದರೂ ಬಂದು ತನ್ನಕಣ್ಣೊರೆಸೀತು… ಮಾತನಾಡಿಸೀತು…..ಎಂಬ ಮತ್ತದೇ ಎರಡು ಕನಸುಗಳು!

ನಲ್ಮೆಯಿಂದ,

ದಿವ್ಯ

Advertisements

Permalink 4 ಟಿಪ್ಪಣಿಗಳು

“ಮಾತಾಡೋ ಮನ”ಕ್ಕೀಗ ಒಂದು ವರುಷ!

ಜನವರಿ 13, 2011 at 1:00 AM (article)

“ಮಾತಾಡೋ ಮನ”

ಮಾತಾಡಿಸಿದೆ ನನ್ನ..

೩-೪ ವರುಷದ ಹಿಂದೆ ನಾನು ಡಿಪ್ಲೊಮಾ ಕಲಿಯುತ್ತಿದ್ದಾಗ ನನ್ನ ಒಂದೆರಡು ಕವನಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದವು.. ನಂತರ ೨-೩ ಕಳುಹಿಸಿದ್ದೆ ಹಾಕಲೇ ಇಲ್ಲ. ಬೇಸರವಾಗಿ ಕಳುಹಿಸುವ ಸಾಹಸವ ಕೈ ಬಿಟ್ಟೆ. ಏನೋ ಕಳೆದುಕೊಂಡ ಅನುಭೂತಿ! ಆದರೂ ಬರೆಯಲು ಮನಸ್ಸಾದಾಗಲೆಲ್ಲಾ ಕವನಕ್ಕೆಂದು ಮಾಡಿದ ಪುಸ್ತಕದಲ್ಲೇ ಬರೆದಿಡುತ್ತಿದ್ದೆ.

ಮುಂದೊಂದು ದಿನ ಇಂಜಿನಿಯರಿಂಗ್ ಪದವಿ ಮಾಡುವಾಗ ಕಂಪ್ಯೂಟರಿನ ಒಡನಾಟವಾದಾಗ ಗೊತ್ತಾಯಿತು. . ಬ್ಲೋಗ್ ಎಂಬ ಲೋಕದ ಬಗ್ಗೆ. ಸಂಪದದಲ್ಲಿ ಮೊದಲಿಗೆ ನನ್ನ ಬ್ಲೋಗ್ ಮಾಡಿ ಬರೆಯತೊಡಗಿದೆ. ಇದೇ ಜನವರಿ ೧೩-೨೦೧೦ರಂದು ನನ್ನದೇ ಬ್ಲೋಗ್ ಇರಲೆಂದು ಇದನ್ನು “ಮಾತಾಡೋ ಮನ” ಎಂದು ನಾಮಕರಣ ಮಾಡಿ ಬರೆಯಲು ಪ್ರಾರಂಭಿಸಿದೆ. ಇದಕ್ಕೆಲ್ಲದಕ್ಕೂ ನನಗೆ ಪ್ರೋತ್ಸಾಹಿಸಿದವರು ಅನೇಕರು! ಸಂಪದ ಬಳಗ, ಸ್ನೇಹಿತರು, ಮನೆಯವರು ನನ್ನ ಬ್ಲಾಗ್ ಓದುಗರು.

“ಮಾತಾಡೋ ಮನ”, ನನ್ನ ಮನಸ್ಸಿನ ಸಂತೋಷ, ದುಖಃ , ತೊಳಲಾಟ, ಭಾವನೆ, ವಿಮರ್ಶೆ ಎಲ್ಲವನ್ನೂ ನನ್ನದೇ ಪದಗಳಲ್ಲಿ ವ್ಯಕ್ತಪಡಿಸುವ ವೇದಿಕೆಯಾಯಿತು. ನನ್ನ  ಆಪ್ತ ಸ್ನೇಹಿತೆಯಾಯಿತು.  ಇದುವರೆಗೆ ೪೭ ಪೋಸ್ಟ್ ಗಳನ್ನು ಮಾಡಿದ್ದು, ಬಂದು ಹೋದವರ ಸಂಖ್ಯೆ “೫೭೩೮”. ಓದುಗರೇ  ನಿಮ್ಮೆಲ್ಲರ ಬೆಂಬಲ ಸಹಕಾರ ಇನ್ನು ಮುಂದೆಯೂ ಇರಲಿ..

ನನಗೆ ಬರೆಯಲು ಪ್ರೋತ್ಸಾಹ ನೀಡುತ್ತಿರುವವರೆಲ್ಲರಿಗೂ ಹೃದಯ ಪೂರ್ವಕ ವಂದನೆಗಳು.

“ಮಾತಾಡೋ ಮನ”ವೇ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಷಯಗಳು.

ನಲ್ಮೆಯಿಂದ

ದಿವ್ಯ

Permalink 7 ಟಿಪ್ಪಣಿಗಳು

Next page »