ಎಡವಟ್ಟಾದ ಮೊದಲ ಇಡ್ಲಿ!

ಜನವರಿ 6, 2011 at 7:57 ಅಪರಾಹ್ನ (article) ()

ನಮ್ಮ ಮನೆ ಅಂದ್ರೆ ಅತ್ತೆ, ಮಾವ,ಮೈದುನ,ನಾವಿಬ್ಬರೇ ಇರೋ ಪುಟ್ಟ ಕುಟುಂಬ. ಅತ್ತೆ “ಹೆಡ್ ಕುಕ್”, ಮಾವ  “ಸೂಪರ್ ವೈಜರ್” ನಾನು “ಹೆಲ್ಪರ್”.  ಮೊದಲ ಬಾರಿ ಈ ಹೆಲ್ಪರ್ ಗೆ ಎಲ್ಲಾ ಪಾತ್ರ ಮಾಡಬೇಕಾದ ಸಂದರ್ಭ ಬಂತು. ಅವರೆಲ್ಲ ಏನೇನೋ ಕಾರ್ಯಕ್ರಮಗಳು ಎಂದು ಊರಿಗೆ ಹೋಗಿ ಬರೋವರೆಗೆ ಈ ಎಲ್ಲಾ ರೋಲ್ ಮಾಡ್ಬೇಕಲ್ಲಾ!. ಆ ಮಹಾನುಭಾವ  ಫೋನ್ ಕಂಡುಹಿಡಿದ ಕಾರಣ ನನ್ನಂಥ ಹೊಸತಾಗಿ ಮದುವೆಯಾಗಿ ಅಡುಗೆ ಸೌಟು ಹಿಡಿದವರು ಹೇಗೋ ತಿಂದು ಉಂಡು ಮಾಡ್ತಿದಾರೆ! ಎಲ್ಲಾ ಫೋನ್.. ಅಮ್ಮ ಅಕ್ಕ ದೊಡ್ಡಮ್ಮ, ಚಿಕ್ಕಮ್ಮ.. ಇದು ಹೇಗೆ ಮಾಡೋದು? ಅದಕ್ಕೆಷ್ಟು ಹಾಕೋದು?!! ಫೋನ್ ಇದ್ರೆ ಸಾಲದು. ಸ್ವಲ್ಪ ಸಾಮಾನ್ಯ ಜ್ಞಾನಾನು ಬೇಕು, ಆಸಕ್ತಿಯೂ ಬೇಕು 🙂


ಹೀಗಿರುವಾಗ ನಾನು ಇಡ್ಲಿ ಮಾಡ್ಬೇಕು ಎಂದು ಹೊರಟೆ. ಬೆಳ್ಳಂಬೆಳಗ್ಗೆ ಅಮ್ಮಂಗೆ ಫೋನ್… ಎಲ್ಲಾ ಎಷ್ಟು ಎಷ್ಟು ಹಾಕ್ಬೇಕು ಎಲ್ಲಾ ಹೇಳಿ ಕೇಳಿ ಆಯ್ತು. ನೆನೆ ಹಾಕಲಿಟ್ಟು, ನಾನು ಆಫೀಸ್ ಸೇರಿ ಆಯ್ತು. ತಲೆಯಲ್ಲಿ ಫುಲ್ ಇಡ್ಲಿ ಇಡ್ಲಿ…! ನಂಗೆ ಇಡ್ಲಿ ತುಂಬಾ ಇಷ್ಟ. ನಾನೆ ಮಾಡೋ ಇಡ್ಲಿ ಹಾಗಾಬೇಕು. ಮಲ್ಲಿಗೆಯಂತೆ ಮೃದು ಆಗ್ಬೇಕು, ಅಂತೆಲ್ಲಾ ಯೋಚನೆ ಮಾಡ್ತಾ.. ಸಂಜೆ ಮನೆ ತಲುಪಿದೆ. ಈಗಲೇ ಕಡೆದಿಡುವ, ಮತ್ತೆ ಹಿಟ್ಟು ಹುಳಿ ಬರ್ಬೇಕು.. ಬಂದಷ್ಟು ಇಡ್ಲಿ ಚೆನ್ನಾಗಾಗುತ್ತೆ ಅಂತ ಗೊತ್ತಿತ್ತು. ನುಣ್ಣಗೆ ಕಡೆದೂ ಆಯ್ತು. ನಮ್ಮ ಮನೆಯವರಿಗೂ ಇಡ್ಲಿ ತುಂಬಾ ಇಷ್ಟ. ನಾಳೆ ತಿಂಡಿ ಇಡ್ಲಿ, ಬಟಾಟೆ ಸಂಬಾರ್ ಎಂದೆ. ಖುಶಿ ಆಯ್ತು ಅನ್ನಿ! ಬೆಳಿಗ್ಗೆ ಬೇಗ ಎದ್ದು ಮೊದಲು ಹಿಟ್ಟಿನ ಪಾತ್ರೆ ತೆಗೆದು ನೋಡಿದೆ. ಉದ್ದು.. ಉದ್ದು.. ವಾಸನೆ ಘಂ ಅಂತ ಹೊಡೆಯಿತು. ಯಾವತ್ತು ಹೀಗಾಗ್ತಿರ್ಲಿಲ್ಲ! ಇವತ್ತು ಹಿಂಗಾಗಿದ್ಯಲ್ಲ!


ಏನೇ ಇರಲಿ, ತಟ್ಟೆಗೆ ಎರೆದು ಇಡ್ಲಿ ಮಾಡಿ ನೋಡೋಣ ಎಂದು ಎರೆದು, ಬೆಂದು, ಇಡ್ಲಿ ರೆಡಿ ಎಂದು ಮುಚ್ಚಳ ತೆಗೆದು ಪ್ಲೇಟ್ ನೋಡಿದ್ರೆ ಇಡ್ಲಿ ಉಬ್ಬಲೆ ಇಲ್ಲ! ಕಲ್ಲಿನಂತೆ ಗಟ್ಟಿ, ಕೆಲವೊಂದು ಮೇಲೆ  ಪಿಚಕ್! ಬೇಯದಂತೆ! ಯೋ ಈಗೇನು ಮಾಡೋದು? ಆಗಲೇ ೭ ಗಂಟೆಯಾಗಿತ್ತು. ೭.೧೫ಕ್ಕೆ ಮನೆಯವ್ರು ಆಫೀಸ್ ಗೆ ಹೋಗ್ಬೇಕು. ಏನೋ ಅದನ್ನು ಹೀಗಾಯ್ತು ಅಂತ ತೋರ್ಸಿದೆ.. ಯಾಕೆ ಹೀಗಾಯ್ತು ಎಂದು ಇಬ್ಬರೂ ತಲೆ ಕೆಡಿಸಿ, ನಾನು ಮಾಡಿದ ಇಡ್ಲಿ ಅಲ್ವಾ ಅಂತ ಹೇಗೋ ೬ ಇಡ್ಲಿ ತಿಂದ್ರು ಸಂಬಾರ್ ಸೂಪರ್ ಅಂತ ಹೇಳಿ ತಿಂದು, ಬುತ್ತಿಗೆ ಇಡ್ಲಿ ಬೇಡ.. ಆಫೀಸ್ ಅಲ್ಲೇ ಊಟ ಮಾಡ್ತೇನೆ ಅಂದು ಹೊರಟಾಯ್ತು. ಆಮೇಲೆ ಹೋಗೋವಾಗ ಇರೋ ಇಡ್ಲಿನ ಹಾಗೇ ಇಡು ಇಲ್ಲ ಕಸದ ತೊಟ್ಟಿಗೆ ಹಾಕು. ಹಿಟ್ಟು ಇನ್ನೂ ಇದೆಯಲ್ಲ. ನೀನು ದೋಸೆ ಮಾಡಿ ತಿಂದು ಹೋಗು ಅಂದ್ರು.. “ಹ್ಮ್” ಎಂದೆ. ಮಾಡಿದವ್ರು ತಿಂದು ನೋಡದಿದ್ರೆ ಆದೀತೇ??… ನಾನು ಇಡ್ಲಿ ತಿನ್ನೋಣ ಎಂದು ಬಾಯಿಗೆ ಹಾಕಿದ್ರೆ.. ಉದ್ದು ಉದ್ದು ಬಾಯಲ್ಲಿಡೋಕೇ ಆಗದಿರೋ ಅಷ್ಟು ಕಷ್ಟ ಆಯ್ತು. ಪಾಪ ಇವರು ೬ ಇಡ್ಲಿ ಹೇಗೆ ತಿಂದ್ರೋ? ನನಗೆ ಬೇಜಾರು ಆಗೋದು ಬೇಡಾ ಎಂದೇ ತಿಂದಿರಬೇಕು ಅಂದ್ಕೊಂಡೆ. ಆಮೇಲೆ ದೋಸೆ ಎರದು ತಿಂದು ಆಫೀಸ್ ಗೆ ಹೋದೆ. ಪುಣ್ಯ.. ದೋಸೆ ಚೆನ್ನಾಗಾಗಿತ್ತು.


ಅಮ್ಮಂಗೆ ಫೋನ್ ಮಾಡಿ.. ಯಾಕೆ ಹೀಗಾಯ್ತು ಎಂದು “ಅ” ದಿಂದ “ಅಃ” ವರೆಗೂ ಅಮ್ಮಂಗೆ ನಾನು ಮಾಡಿದ ರೀತಿ ವಿವರಿಸಿದೆ.. “ನೀನು ಹೇಳಿದ ಎಲ್ಲವನ್ನು ಒಂದೇ ಪಾತ್ರೆಯಲ್ಲೇ ನೆನೆ ಹಾಕಿ, ಒಟ್ಟಿಗೆ ಮಿಕ್ಸಿಲಿ ಕಡೆದು ಹುಳಿಬರೋಕೆ ಇಟ್ಟು ಬೆಳಿಗ್ಗೆ ಇಡ್ಲಿ ಮಾಡಿದೆ” ಎಂದು ಹೇಳಿ ಮುಗಿಸೋದು ಬೇಡ್ವಾ.. ಅಮ್ಮಂದು ಆ ಕಡೆಯಿಂದ ಜೋರು ನಗು! ಎಲ್ಲಿ ತಪ್ಪಿದ್ದು ನಾನು ಎಂದು ಕೇಳಿದೆ. ಅಮ್ಮ,” ನಿನಗೆ ಎಲ್ಲಾ ಹೇಳಿ ಉದ್ದು ಬೇರೆ, ಅಕ್ಕಿ ಬೇರೆಯಾಗಿ ಕಡೆದಿಟ್ಟು ಕೊನೆಗೆ ಮಿಕ್ಸ್ ಮಾಡಿ ಇಡ್ಬೆಕು ಅಂತ ಒಂದು ವಾಕ್ಯ ಹೇಳೋದು ಬಿಟ್ತೋಯ್ತು!!. ನಿಂಗೆ ಗೊತ್ತಿದೆಯೇನೋ ಅಂತ ಅಂದ್ಕೊಂಡೆ” ಅಂದ್ರು! 😦  ಬೇಕಾ??!!


ಆದ್ರೂ.. ಅನುಭವವೇ ಗುರು ಅಂದ ಹಾಗೆ ಮತ್ತೊಮ್ಮೆ ಮಾಡಿದೆ “ಇಡ್ಲಿ..” ವಾ! ಸುಪರ್ ಆಗಿತ್ತು… 🙂 ಹೀಗೇ ಅಡುಗೆಲಿ ಸ್ಪೆಶಲಿಸ್ಟ ಆಗೋಕೆ ಹೆಜ್ಜೆ ಹಾಕ್ತಿದೇನೆ. ಏನೇ ಹೇಳಿ.. ಸೌತ್ ಇಂಡಿಯನ್ ಅಡುಗೆ ಎದುರು ನಾರ್ತ್ ಎಷ್ಟೋ ಸುಲಭ  ಅನ್ಸಿಬಿಟ್ಟಿದೆ..!!!

ನಲ್ಮೆಯಿಂ

ದಿವ್ಯ

Advertisements

6 ಟಿಪ್ಪಣಿಗಳು

 1. kavya said,

  antu intu idli madide bidu:)

 2. shimladkaumesh said,

  ಗುಡ್… ಆ ಮೇಲೆ… ಇನ್ನೇನು ? 😉 ಉತ್ತಮ ಬರೆಹ… ಅನುಭವ ಚೆನ್ನಾಗಿದೆ… ಏನೇ ಆಗ್ಲಿ… ಮಸಾಲೆ ದೋಸೆ ಮಾತ್ರ ಸೂಪರ್‌…

 3. shimladkaumesh said,

  ಹ್ಞಾಂ… ದಿವ್ಯಾ ಅದು ಎಡವಟ್ಟಾದ ಮೊದಲ ಇಡ್ಲಿ ಅನ್ನೋದಕ್ಕಿಂತಲೂ “ಮೊದಲಾ ಸಲ… ” ಎಂದಿದ್ರೆ ಚೆನ್ನಾಗಿತ್ತು..

 4. ಜಗದೀಶಶರ್ಮಾ said,

  ಮೊದ ಮೊದಲ್ ಮಾಡಿದ ಕಲ್ಲಿನ ಇಡ್ಲಿ….. ಎಲ್ಲಿಡ್ಲಿ?

 5. chukkichandira said,

  ha ha. gud experiance

 6. lohith said,

  ಹಹ್…ಹಹ್…..ಹಹ್……….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: