“ಭವಿಷ್ಯ ಹೇಳುವ ಬಾಳೆಕಾಯಿ”

ಜುಲೈ 21, 2010 at 3:07 ಅಪರಾಹ್ನ (article)

ಭವಿಷ್ಯ ಹೇಳುವ ಬಾಳೇಕಾಯಿ!!! ಹೌದು… ಕಣ್ಣಾರೆ ಕಂಡ ಸತ್ಯ.ಫುಟ್ಬಾಲ್ ವಿಶ್ವಕಪ್ ನಡೆಯುತ್ತಿದ್ದ ಸಮಯ, ಆಕ್ಟೋಪಸ್ ಹೇಗೆ ಭವಿಷ್ಯ ನುಡಿದಿತ್ತು.

ಹಾಗೆಯೇ ಮದುವೆಗೆ ಎಷ್ಟು ಜನ ಆಗಬಹುದೆಂದು ಬಾಳೇಕಾಯಿ ಭವಿಷ್ಯ ಹೇಳಿತು ಎಂದರೆ ನಂಬುವಿರೇ??
ಇದೇ ತಿಂಗಳ ಐದರಂದು ನನ್ನ ಮದುವೆಯಾಯಿತು.ಈ ಕಾರಣಕ್ಕಾಗಿಯೇ  ಬ್ಲಾಗ್ನಲ್ಲಿ ಹೊಸ ಪೋಸ್ಟ್ ಹಾಕಲಾಗಲಿಲ್ಲ. ಅದಿರಲಿ, ಐದರಂದು “ಭಾರತ ಬಂದ್” ಘೋಷಣೆಯಾಗಬೇಕೇ?? ಮದುವೆ ಕಾಗದವೆಲ್ಲ ಬಂದ್ ವಿಶ್ಯ ಕಿವಿಗೆ ಬೀಳೋ ಮೊದಲೇ ಎಲ್ಲರ ಕೈಗೆ ಸೇರಿಯಾಗಿತ್ತು. ಫೋನ್ ಮೇಲೆ ಫೋನ್, ಮದುವೆಗೆ ಹೇಗೆ ಬರುವುದು? ಪ್ರಯತ್ನಿಸುತ್ತೇವೆ, ಬಸ್ ಇದ್ದರೆ ಬರುವೆವು ಎಂದು ನೆಂಟರಿಷ್ಟರು!

ಸಮಸ್ಯೆ ಪ್ರಾರಂಭ ಇಲ್ಲಿಂದ, ಅಡುಗೆ ವ್ಯವಸ್ಥೆ ಹೇಗೆ? ಎಷ್ಟು ಜನಕ್ಕಾಗಿ ಊಟದ ವ್ಯವಸ್ಥೆ ಮಾಡುವುದು ಎಂದು ಲೆಕ್ಕವೇ ಸಿಗದಂತಾಯಿತು. ಬಂದ್ ಪ್ರಬಲವಾಗಿದ್ದರೆ ಮಾಡಿದ್ದೆಲ್ಲಾ ಮದುಮಗ ಮದುಮಗಳು ಕೂತು ತಿನ್ನಬೇಕಷ್ಟೇ ಎಂದು ಹೇಳುವವರು, ಅಲ್ಲಾ ೫೦೦ ಎಸ್ಟಿಮೇಶನ್ ಅಡುಗೆಯಲ್ಲಿ ಜನ ೨೫೦ ಆದರೆ?ಉಳಿದ ೨೫೦ ಜನರ ಊಟ ನಾವಿಬ್ಬರು ಕುಳಿತು ತಿಂದು ಖಾಲಿ ಮಾದುವುದೇ?? 😦 ಮುಹು!!
ಮದುವೆಗೆ ಜನ ಎಷ್ಟಾಗಬಹುದು ಎಂದು ತಿಳಿಯಲು ಕೊನೆಗೆ “ದೇವರ” ಮತ್ತು “ಬಾಳೇಕಾಯಿ” ಮೊರೆ ಹೋಗುವುದೊಂದೇ ಇದ್ದ ಕಡೇಯ ಉಪಾಯ.

ಮದುವೆಯ ಹಿಂದಿನ ದಿನ ರಾತ್ರಿಗೆ “ಗಣಪತಿ ಪೂಜೆ” ಮಾಡಿ ಅಡುಗೆ ಭಟ್ಟರಿಂದ ಬಾಳೇಕಾಯಿ ತುಂಡರಿಸಿ ನೀರು ಹಾಕಿದ ಪಾತ್ರೆಯಲ್ಲಿ ಬಿಡುವುದು. ತೇಲಿದ ಬಾಳೇಕಾಯಿಗೆ ಲೆಕ್ಕಾಚಾರ! ಬಿಳಿಯ ಬಣ್ಣದಲ್ಲಿ ಅಂದ್ರೆ ಒಳಮೈ ಕಾಳುವಂತೆ ತೇಲಿದ್ದನ್ನ ಲೆಕ್ಕಕ್ಕೆ ತೆಗೆದುಕೊಳ್ಳುವುದು. “ಒಂದು ಬಿಳಿಯ ತುಂಡಿಗೆ ೨೫ ಜನ” .


೧೪ ಬಿಳಿ ತಿಂಡುಗಳು ತೇಲುತ್ತಿತ್ತು.ಕೊನೆಗೆ ೩೫೦ಕ್ಕೆ ಲೆಕ್ಕ ಸಿಕ್ಕಿತು. ಮರುದಿನದ ಅಡುಗೆ ೩೫೦ಕ್ಕೆ ಮಾಡಿದರು. ಈಗ ಇದನ್ನು ನಂಬದಿದ್ದ ನನ್ನಂಥವರಿಗೆ ಕುತೂಹಲ,ಮದುವೆಗೆ ಜನ ಏಷ್ಟಾಗಬಹುದು? ೫೦೦? ೩೫೦? ೨೫೦?

ಮದುವೆದಿನ ಊಟವೆಲ್ಲ ಆದನಂತರ ಲೆಕ್ಕ ಸಿಕ್ಕಿತು. ಹರಸಿ ಉಂಡು ಹೋದವರ ಸಂಖ್ಯೆ ೩೫೦ ಅಂದಾಜೇ ಇರಬಹುದು.. ಮಾಡಿದ ಅಡುಗೆ ಯಾವುದಕ್ಕೂ ಕೊರತೆಯಾಗಿಲ್ಲ ಉಳಿದು ಹೋಗಲೂ ಇಲ್ಲ!! ಅಬ್ಬಾ ನಂಬಲೇ ಬೇಕಾಯ್ತಲ್ಲಾ.. ಬಾಳೇಕಾಯಿ ಭವಿಷ್ಯ ನುಡಿದಿದ್ದನ್ನ! 🙂
* ಹವ್ಯಕರ ಮದುವೆಗಳಲ್ಲಿ ಮದುವೆಯ ಹಿಂದಿನದಿನ ರಾತ್ರಿಗೆ ಈ  ಬಾಳೇಕಾಯಿ ಎಸ್ಟಿಮೇಶನ್ ಜನರ ಲೆಕ್ಕ ಕೊಡುತ್ತದೆ..!!
“ಹೀಗೂ ಉಂಟೇ??”…….. ಉಂಟಲ್ಲ ಮಾರಾಯ್ರೆ!! 😉

-ನಲ್ಮೆಯಿಂದ

ದಿವ್ಯ

Advertisements

Permalink 5 ಟಿಪ್ಪಣಿಗಳು