ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ..

ಜನವರಿ 29, 2010 at 2:12 AM (article)

ಅವನ ಕಣ್ಣುಗಳಿಂದ ಹನಿಗಳು ಇಳಿಯುತ್ತಿತ್ತು. ಮೌನಿಯಾಗಿ.. ಒಬ್ಬನೇ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಿಟಕಿಯಿಂದಾಚೆಗೆ ಕಾಣಿಸುತ್ತಿದ್ದ ಸುಂದರ ಸಂಜೆಯ ಕೆಂಪಾದ ಸೂರ್ಯ ಮುಳುಗುವುದನ್ನೇ ಧಿಟ್ಟಿಸುತ್ತಿದ್ದ. ನೋಡುವ ನೋಟದಲ್ಲಿ ಕಣ್ಣ ಹನಿಗಳು ತುಂಬಿದಾಗ ದೃಷ್ಟಿ ಮಂಜಾದಂತಾಗಿ ,ಕೆನ್ನೆ ಮೇಲೆ ಹನಿಗಳು ಇಳಿದಾಗ ಪುನಃ ಸ್ಪಷ್ಟವಾದ ಮತ್ತದೇ ನೋಟ..!

ಆ ಬಾನಂಗಳದಲ್ಲಿ ಬಣ್ಣವ ಹರಡುತ್ತಾ ಮುಳುಗುತ್ತಿದ್ದ ರವಿಯು.. ಕಳೆದ ದಿನಗಳನೆಲ್ಲಾ ನೆನಪಿಸುತ್ತಿದ್ದ. ಅವಳ ಮೊದಲ ಭೇಟಿ, ನೋಟ, ಮಾತು, ಮನಸ್ಸು, ಒಲವು, ಪ್ರೀತಿ ಎಲ್ಲವು ಕಣ್ಣೆದುರೇ ಬಂದಂತಾಗಿತ್ತು. ಮನಸು ಅವನಲ್ಲಿ ನೂರಾರು ಪ್ರಶ್ನೆಗಳನ್ನಿಡುತ್ತಿತ್ತು! ನನ್ನಷ್ಟಕ್ಕೇ ಇದ್ದೆನಲ್ಲಾ ನಾನು.. ಅದೇಕೆ ಸಿಕ್ಕಿದಳೋ, ಮನ ಕದಡಿದಳೋ? ಸುಮ್ಮನಿದ್ದೆ ನಾನು, ಅವಳಾಗೇ ಒಂಟಿ ಜೀವಕೆ ಹತ್ತಿರವಾಗಿದ್ದು, ಎದೆಯ ಬಾಗಿಲನ್ನು ತಟ್ಟದೇ ಒಳಗೆ ಬಂದು ಬಿಟ್ಟೆ! ಹೊರಗೆ ಕಳಿಸಲಾಗುತ್ತಿಲ್ಲ ಹೋಗಬೇಕೆನ್ನುತ್ತಿದ್ದೀಯಲ್ಲಾ.. ಇಲ್ಲದ ಆಸೆಯ ಹುಟ್ಟು ಹಾಕಿ, ಹೀಗೆ ಹೊರಟು ಹೋದರೆ.. ನನ್ನ ಗತಿ ಏನು?

ಬೊಬ್ಬಿಟ್ಟು ಅಳಬೇಕೆನ್ನುತ್ತಿತ್ತು ಅವನ ಮನ.. ಆದರೆ ಗಂಡಸೆನ್ನುವುದು ಅಡ್ಡ ಬಂದು ಬಿಟ್ಟಿತು ಅಳುವಿಗೂ..! ಕಣ್ಣ ನೀರು ಹಾಗೇ ಇಳಿದು ಶರ್ಟ್ ಅನ್ನೇ ತೋಯುತ್ತಿತ್ತು! ಮನೆಯವರನ್ನ ಹೇಗಾದರೂ ಮಾಡಿ ಮದುವೆಗೊಪ್ಪಿಸ ಬಹುದಿತ್ತು. ಬಾಳಿನ ರಥವನ್ನೆಳೆಯ ಬಹುದಿತ್ತು? ಅಡ್ಡ ಬಂದುದಾದರೂ ಏನು? ಜಾತಿ ಮತ ಭಾಷೆ ಎಲ್ಲವೂ ಹೊಂದುತ್ತಿತ್ತು! ಯಾಕೆ ಬೇಡವಾದೆ ನಾನು? ನಿನ್ನನ್ನು ಚೆನ್ನಾಗೆ ನೀಡಿಕೊಳ್ಳುತ್ತಿದ್ದೆ. ಸಂತೋಷದಲ್ಲೇ ಜೀವನ ನಡೆಸಬಹುದಿತ್ತು..

ಆದರೆ ನೀನು ಹೇಳಿಹೋದ ಕಾರಣ!! ಅದು ಸಹಿಸಲಾಗುತ್ತಿಲ್ಲ… “ನಿನ್ನೊಡನೆ ಜೀವಿಸಿ ಸುಖದಲ್ಲಿರುವೆನೆಂಬ ಖಾತ್ರಿಯಿಲ್ಲ, ಆದರೆ ಮನೆಯವರು ನೋಡಿದ ಹುಡುಗ, ಕೈ ತುಂಬಾ ಹಣ ತರುವವನು. ನಾನು ಆರಾಮ ಲೈಫ್ ಇಷ್ಟ ಪಡುತ್ತೇನೆ.. ಹಿಂಬಾಲಿಸದಿರು” ಎಂದು ೩ ಮಾತನಾಡಿ ಹೋಗೇ ಬಿಟ್ಟೆ!! ಹಾಗಾದರೆ ಇಲ್ಲಿ ವರೆಗೆ ನೀನಾಡಿದ ಮಾತುಗಳು? ಎಲ್ಲವೂ ಕಾಲ್ಪನಿಕ!! ನನಗರಿಯದಾಯಿತಲ್ಲ.. ಮುಗ್ಧ ನಾನು! ಈಗ ಬೇಕಾದಷ್ಟು ಕಣ್ಣೀರಿಡಲೂ ಆಗುತ್ತಿಲ್ಲ.. ಈ ರೀತಿ ಕಣ್ಣೀರನು ನನು ಪಿಯುಸಿ ಫೈಲ್ ಆದಾಗಾಗಲಿ, ಜೀವನದಲ್ಲಿ ಮುಂದೆ ಬಂದು ಕಲಿತು ಸಾಧಿಸಿ ಉತ್ತಮ ಕೆಲಸ ಸಿಕ್ಕಿದಾಗಲೂ, ಸಂತೋಷಕ್ಕೂ ,ಯಾವುದೇ ದುಖಃಕ್ಕೂ ಸುರಿಸಿರಲಿಲ್ಲ!!

ರೂಮ್ ಬಾಗಿಲು ಚಿಲಕ ಹಾಕಿದ್ದ. ಯಾರಿಗೂ ಇವನ ಕಣ್ಣೀರು ಹರಿದ ಸದ್ದೂ ಕೇಳದು! ಆಗಸದಿ ರವಿವು ಮುಳುಗುತ್ತಾ ಬಂದ. ರವಿಯೂ ಮರೆಯಾದನಲ್ಲ… ಯಾರಲ್ಲಿ ಹೇಳಿಕೊಳ್ಳಲಿ..? ಏನು ಹೇಳಲಿ… ಎಂದು ಬೋರಲಿ ಮಲಗಿದ.. ಮೌನವಾಗಿ ಕಣ್ಣೀರಿನೊಂದಿಗೆ ಅವನ ಕೆನ್ನೆಯೊಂದೇ ಮಾತಾಡುತ್ತಿತ್ತು!!

4 ಟಿಪ್ಪಣಿಗಳು

  1. ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ ) said,

    good..ಇಷ್ಟವಾಯಿತು..ಚೆನ್ನಾಗಿದೆ.

  2. ದಿವ್ಯ said,

    ವಂದನೆಗಳು.. 🙂

  3. Pradnya said,

    hey dear font s too small yaar.. next time do write wit little big font size

  4. ದಿವ್ಯ said,

    oh.. okay..

ನಿಮ್ಮ ಟಿಪ್ಪಣಿ ಬರೆಯಿರಿ