ಶೀರ್ಷಿಕೆ ಇಲ್ಲದ ಅವಳ ಕಥೆ

ಜೂನ್ 14, 2011 at 12:28 ಅಪರಾಹ್ನ (article)

ಅವಳಲ್ಲಿ ಮನ ಬಿಚ್ಚಿ ಮಾತನಾಡಿದಾಗ ,ಇದು ಅವಳು ಎಂದು ಎನಿಸಿಕೊಳ್ಳುವ ಎಲ್ಲರ ಬದುಕಿನ ಕಥೆಯೋ ಏನೋ ಅಂತೆನಿಸಿತು. ನೂರಾರು ಕನಸುಗಳನ್ನು ಕಟ್ಟಿ ಬಂದ ಆಕೆಗೆ ಮದುವೆಯ ಮೊದಲ ರಾತ್ರಿ ಕೊಟ್ಟ ಭರವಸೆಯ ಮಾತುಗಳೆಲ್ಲ ಮಳೆಗಾಲದ ಮಳೆ ಕೊಚ್ಚಿಕೊಂಡು ಹೋಗುವಂತೆ ಮರುದಿನದಿಂದಲೇ ಒಂದೊಂದು ಮಾತು, ಉಳಿದವರ ಮಾತುಗಳಿಂದ ಕೊಚ್ಚಿ ಹೋಗಲಾರಂಭಿಸಿದ್ದವು. ಬದುಕೇನು ಎಂಬುದನ್ನು ಅರ್ಥ ಮಾಡಿಸಿತ್ತು. ತವರು ಮನೆಯಲ್ಲಿದ್ದಾಗಿನ ಸಂತಸವನ್ನು ನೆನೆದು ಎಲ್ಲಾ ಹೆಣ್ಣು ಮಕ್ಕಳೂ ಅವಳಂತೆಯೇ ಒಂದಲ್ಲ ಒಂದು ದಿನ ಬಚ್ಚಲಿನಲ್ಲಿ ನಳ್ಳಿ ಬಿಟ್ಟು ಅತ್ತಿರುತ್ತಾರೆ. ಆ ನಳ್ಳಿ ನೀರಿನ ಜೊತೆ ಕಣ್ಣೀರನ್ನು ಹೆಕ್ಕಲು ಯಾರೂ ಬರುವುದಿಲ್ಲ. ಗಂಡನ ಭರವಸೆಯ ಮಾತುಗಳು ಕೂಡಾ!. ಅವಳು ನನ್ನೊಂದಿಗೆ ಮಾತನಾಡಿದ ಒಂದೊಂದು ಮಾತುಗಳೂ ಎಲ್ಲಾ ಹೆಣ್ಣು ಮಕ್ಕಳು ಒಕ್ಕೊರಲಿನಿಂದ ಹೇಳಿದಂತೆ ಕೇಳಿಸಿತು.

ಮನೆ ಬೆಳಗುವವಳು ಮನ ಬೆಳಗದಿರುವಳೇ? ಬದುಕೇ ಅವನೆಂದು ತಿಳಿದು ಬದುಕುವವಳಿಗೆ ಅವನಿಂದ ಸಿಗುವುದು ಒಂದಿಷ್ಟು ನಿಟ್ಟುಸಿರಿನ ಉತ್ತರ, ದಟ್ಟಿಸಿ ಕೇಳಿದ ಪ್ರಶ್ನೆಗಳು ಮಾತ್ರ!. ಇಲ್ಲೂ ಮನಗಳಲ್ಲಿ ಮನೆ ಇಲ್ಲದೆ, ತನ್ನ ಮನೆ ಹೋಗಿ ಗಂಡನಮನೆಯಾಗಿ ತನ್ನ ಮನೆ ತವರುಮನೆಯಾಗಿ, ಮಾರ್ಪಟ್ಟು, ಬೇರ್ಪಟ್ಟು, ಆ ಮನಗಳನ್ನು ಮರೆಯಲಾಗದ ಸಂಕಟ, ಈ ಮನಗಳು ಮನದಲ್ಲಿಷ್ಟು ಜಾಗಕೊಡಲೊಲ್ಲದವರು. ಹ್ಮ್‌ಅವಳು ಹೇಳುತ್ತಿದ್ದ ಮಾತುಗಳು ಎಲ್ಲೋ ನಮ್ಮ ಬದುಕಿಗೂ ಹತ್ತಿರದಲ್ಲಿದೆ ಅಲ್ಲವೇ?

ಬೆಳಗ್ಗೆದ್ದರೆ ಅದೇ ಮೌನ. ಮೌನದಲ್ಲೊಂದಿಷ್ಟು ಮನಸ್ಸಿಲ್ಲದ ಮುಗುಳುನಗೆ. ಗಂಡ ಹೊರಡುವಾಗ ಗೇಟ್ ಬಳಿಗೆ ಬಂದು ಸಂಜೆ ಬೇಗ ಬರುವ್ ಎಂದು ಕಣ್ಣ ಸನ್ನೆಯಲ್ಲೇ ಕೇಳಿ ಕಳುಹಿಸುತ್ತಿದ್ದವಳು, ಈಗ ಹೊರಡುವಾಗ ಹಿಂತಿರುಗಿಯೂ ನೋಡದಷ್ಟು ಅವರಿಬ್ಬರ ಬದುಕು ಪಯಣಿಸಿದೆ.

ಇಬ್ಬರೂ ಕುಳಿತು ಮಾತನಾಡಿದರೆ ನೀನು ಹೋಗಬೇಕೆಂದಲ್ಲಿಗೆಲ್ಲ ಹೋಗಿದ್ದೇ, ಕೇಳಿದ್ದೆಲ್ಲ ತೆಗೆದು ಕೊಟ್ಟಿರುವೆ. ಇನ್ನೇನು ಬೇಕು? ಈ ಮಾಮೂಲಿ ಪ್ರಶ್ನೆ. ಅದನ್ನೆರಡನ್ನೂ ಬಿಟ್ಟು ಪ್ರೀತಿಯ ಮಾತುಗಳನ್ನಾಡಲು, ಭವಿಷ್ಯದ ಬಗ್ಗೆ ಕನಸುಗಳನ್ನು ಹಂಚಲು ಕೇಳಿ ಹೇಳಿಯೇ ಆಗಬೇಕೇ ಅಂದು ಅವಳು ಪ್ರಶ್ನೆ!

ಮನೆಯಲ್ಲಿ ಮಾಡಿಹಾಕಿದ್ದನ್ನು ತಿನ್ನು, ಕೆಲಸಕ್ಕೆ ಹೋಗು ಅದೇ ಗಂಡನಿಗಾಗೆ ಮತ್ತೆ ಕನಸುಗಳ ಕಟ್ಟಿ ಕಾದು ಕೂರುವುದು,ಬಂದ ನಂತರ ಮತ್ತದೇ ಮೌನ ಮಾತಾಡಿದರೆ ಅದೇ ಎರಡು ವಾಕ್ಯ, ಅದೇ ಬೆಳಗ್ಗೆ, ಅದೇ ಸಂಜೆ. ಅಷ್ಟು ಜನರಿದ್ದೂ ಅವಳು ಕೊನೆಗೂ ಒಬ್ಬಂಟಿ, ಏಕಾಂಗಿ!! ಆದರೂ ಕಣ್ಣೊರೆಸಿ ಅವಳು ಕೂರಲು ಕಾರಣ; ತನ್ನ ಕರುಳ ಕುಡಿಯಾದರೂ ಬಂದು ತನ್ನಕಣ್ಣೊರೆಸೀತು… ಮಾತನಾಡಿಸೀತು…..ಎಂಬ ಮತ್ತದೇ ಎರಡು ಕನಸುಗಳು!

ನಲ್ಮೆಯಿಂದ,

ದಿವ್ಯ

ಪರ್ಮಾಲಿಂಕ್ 4 ಟಿಪ್ಪಣಿಗಳು

ನಿನ್ನೆ ನಾಳೆಗಳ ನಡುವೆ!

ಫೆಬ್ರವರಿ 7, 2011 at 4:27 ಅಪರಾಹ್ನ (kavana)

ಭಾವನೆಗಳಿಗೆ ಪೆಟ್ಟು ಬಿದ್ದಾಗ
ಪಟ್ಟು ಹಿಡಿದರೂ ಬರದು
ನೋವ ಸಹಿಸುವ ಬಲ

ಬದುಕಲ್ಲಿ ಹುಂಬ ಆಸೆಗಳ
ಕಾರುಬಾರು ಕೈಗೂಡದಾಗ
ನಿರಾಸೆಗೆಯೇ ಮರು ಜಯ

ಸುಂದರ ನಾಳೆಗಾಗಿ ನಿನ್ನೆಗಳತ್ತ
ಸಾಗಿ, ಬದುಕಲ್ಲಿ ಲೆಕ್ಕವ ಹಾಕಿ
ಹೋದ “ಇಂದು” ಎಂಬ ಕಾಲ!

ನಲ್ಮೆಯಿಂದ
ದಿವ್ಯ

ಪರ್ಮಾಲಿಂಕ್ 2 ಟಿಪ್ಪಣಿಗಳು

Next page »